ಲಿಂಗಸಗೂರು:ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ-ನ್ಯಾ ಮಂಜುಳಾ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು. ಸೆ.30.-ಮನುಷ್ಯನಿಗೆ ಬಹುತೇಕ ರೋಗಗಳು ಸ್ವಚ್ಛತೆಯ ಕೊರತೆಯಿಂದ ಬರುತ್ತಿದ್ದು ನಾವೆಲ್ಲರೂ ರೋಗ ರುಜಿನಗಳಿಂದ ದೂರವಿರಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಾ. ಕಾ. ಸೇ. ಸ ಅಧ್ಯಕ್ಷರು, ಗೌರವಾನ್ವಿತ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪುರಸಭೆ ಕಾರ್ಯಾಲಯ, ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಹಾಗೂ ಕಾನೂನು ಅರಿವು ಮತ್ತು ಜಾಗೃತಿ ಜಾತಾ ಕಾರ್ಯಕ್ರಮಕ್ಕೆ ಕಸಗೂಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಛ ಭಾರತ ಅಭಿಯಾನವು ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡಿಕೊಳ್ಳಲು ಜ್ಞಾನ ಮೂಡಿಸುವ ಕಾರ್ಯಕ್ರಮ ವಾಗಿದ್ದು ನಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವಲ್ಲದೆ ಸಾರ್ವಜನಿಕ ಶಾಲಾ ಕಾಲೇಜು ಸರಕಾರಿ ಕಚೇರಿಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ತಮ್ಮ ಮನೆಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಪುರಸಭೆಯ ಕಸ ವಿಲೇವಾರಿ ಮಾಡುವ ವಾಹನದಲ್ಲಿ ಹಾಕಿ ಸ್ವಚ್ಛತೆಗೆ ಸಹಕರಿಸಬೇಕು.
ಯಾವ ಸ್ಥಳಗಳಲ್ಲಿ ಹೆಚ್ಚು ಸೊಳ್ಳೆಗಳು ಆ ಡಗಿರುತ್ತವೆಯೋ
ಅಸ್ವಚ್ಚತೆಯಿಂದ ಅಲ್ಲಿ ರೋಗ ರುಜಿನಗಳು ಹರಡುತ್ತಿವೆ. ನಮ್ಮ ಮನೆಯ ಸುತ್ತಮುತ್ತ ಲಿನ ವಾತಾವರಣ ಸ್ವಚ್ಛತೆ ಇದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ಆರೋಗ್ಯ ಚೆನ್ನಾಗಿದ್ದರೆ ನಮ್ಮ ಮನಸು ಶುದ್ಧವಾಗಿರುತ್ತದೆ ಎಂದು ಅವರು ಹೇಳಿದರು.
ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಂಬಣ್ಣ ಕೆ, ವಕೀಲರ ಸಂಘದ ಅಧ್ಯಕ್ಷರಾದ ಭೂಪನಗೌಡ ಪಾಟೀಲ್ ಕರಡಕಲ್, ಹಿರಿಯ ವಕೀಲರಾದ ಮುದುಕಪ್ಪ ನೀರಲಕೇರ, ಆಶಿಕ್ ಅಹಮದ್, ಸಿಪಿಐ ಪುಂಡಲಿಕ್ ಪಟಾತರ್, ಪಿಎಸ್ಐ ಹನುಮಂತಪ್ಪ, ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿಗಳು, ಪೌರಕಾರ್ಮಿಕರು, ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಸ್ವಚ್ಛತಾ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.