ನಾಗಮಂಗಲ ಗಲಾಟೆ 52 ಜನರ ಬಂಧನ: ಗೃಹ ಸಚಿವ ಪರಮೇಶ್ವರ*

Laxman Bariker
ನಾಗಮಂಗಲ ಗಲಾಟೆ 52 ಜನರ ಬಂಧನ: ಗೃಹ ಸಚಿವ ಪರಮೇಶ್ವರ*
WhatsApp Group Join Now
Telegram Group Join Now

*ನಾಗಮಂಗಲ ಗಲಾಟೆ 52 ಜನರ ಬಂಧನ: ಗೃಹ ಸಚಿವ ಪರಮೇಶ್ವರ*

-ಮುಂಜಾಗ್ರತಾ ಕ್ರಮ ವಹಿಸಿ ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿ ನಿಯೋಜನೆ
-ಎಡಿಜಿಪಿ, ಐಜಿಪಿ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ

ಕಲ್ಯಾಣ ಕರ್ನಾಟಕ ವಾರ್ತೆ

*ಬೆಂಗಳೂರು, ಸೆ.12;-* ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಗಲಾಟೆಯನ್ನು ಪೊಲೀಸರು ಕೂಡಲೇ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಘಟನೆ ಆಗಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಅಂತ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಘಟನೆಯನ್ನು ಪೊಲೀಸರು ಕೂಡಲೇ ನಿಯಂತ್ರಣಕ್ಕೆ ತಂದಿದ್ದಾರೆ. ದೊಡ್ಡ ಗಲಾಟೆಎಂದರು.

ಮೆರವಣಿಗೆ ವೇಳೆ ಕಲ್ಲು ತೂರಾಟವಾದಾಗ ಒಬ್ಬರಿಗೊಬ್ಬರಿಗೆ ಘರ್ಷಣೆ ಮಾಡಿಕೊಂಡಿದ್ದಾರೆ. ಆನಂತರ ಎಲ್ಲವೂ ಸರಿ ಹೋಯ್ತು ಅಂತ ವಾಪಸ್ ಹೋಗುವಾಗ, ಕೆಲವರು ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ಅಷ್ಟರೊಳಗೆ ಪೊಲೀಸರು ಎಚ್ಚೆತ್ತುಕೊಂಡು ಹತೋಟಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರು, ಐಜಿಪಿ, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದೇನೆ. ಘರ್ಷಣೆ ಮಾಡಿಕೊಂಡಿದ್ದಾರೆ, ಈ ಘಟನೆಯನ್ನು ಕೋಮು ಗಲಭೆ ಅಂತ ಹೇಳಲಾಗುವುದಿಲ್ಲ. ಇದನ್ನು ಹೆಚ್ಚು ಬೆಳೆಯಲು ಬಿಡುವುದಿಲ್ಲ, ಪೊಲೀಸರು ಬಿಟ್ಟಿಲ್ಲ. ಹೆಚ್ಚು ಪ್ರಚಾರ ನೀಡುವುದು ಬೇಡ ಎಂದು ಮನವಿ ಮಾಡಿದರು.

ಘಟನೆಯಲ್ಲಿ ಹೆಚ್ಚು ಜನರಿಗೆ ಗಾಯಗಳಾಗಿಲ್ಲ. ಗಲಭೆಗೆ ಸಂಬಂಧಿಸಿದಂತೆ ಎರಡು ಗುಂಪಿನ ಒಟ್ಟು 52 ಜನರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅದನ್ನು ಆಧರಿಸಿ ಯಾರೆಲ್ಲ ಕಲ್ಲು ತೂರಿದ್ದಾರೆ, ಬೆಂಕಿ ಹಾಕಿದ್ದಾರೆ ಅವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರಿಗು ಕಲ್ಲು ಏಟು ಬಿದ್ದಿದ್ದು, ಓರ್ವ ಏಸ್ಐ ಗಾಯಗೊಂಡಿದ್ದಾರೆ. ಇದರಲ್ಲಿ ರಾಜಕೀಯ ಪ್ರಚೋದನೆ ರೀತಿ ಕಾಣುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಘಟನೆಗೆ ಅತಿಯಾದ ಓಲೈಕೆಯೇ ಕಾರಣ ಎಂದಿರುವ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಅವರು ಈ ಹಿಂದೆ ಯಾವ ರೀತಿ ಓಲೈಕೆ ಮಾಡುತ್ತಿದ್ದರೋ ಗೊತ್ತಿಲ್ಲ ಎಂದರು.

ಇದರಲ್ಲಿ ರಾಜಕೀಯ ಮಾಡುವುದು ಬೇಡ. ಪೊಲೀಸರಿಗೆ ಬಿಟ್ಟರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಕಾನೂನು ಸಲಹೆ ಕೊಡುವುದಾದರೆ ಸ್ವಾಗತ ಮಾಡುತ್ತೇನೆ. ಘಟನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.

*ಪಿಎಸ್ಐ ಪರೀಕ್ಷೆ ಸೆ.28ಕ್ಕೆ:-*
ಪಿಎಸ್‌ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸೆ.28 ಶನಿವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.

ರಾಜ್ಯದ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದು, ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ. ಮುಖ್ಯ ಪರೀಕ್ಷೆಗೆ ಮತ್ತು ಪಿಎಸ್‌ಐ ಪರೀಕ್ಷೆ ಸೆ.22ರಂದು ನಿಗದಿಯಾಗಿರುವುದರಿಂದ ಎರಡು ಪರೀಕ್ಷೆ ಬರೆಯಲು ಆಗುವುದಿಲ್ಲ. ಯಾವುದಾದರು ಒಂದು ಪರೀಕ್ಷೆ ಅವಕಾಶ ಕೈತಪ್ಪುತ್ತದೆ. ಹೀಗಾಗಿ ಪಿಎಸ್ಐ ಪರೀಕ್ಷೆ ಮುಂದೂಡುವಂತೆ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದರು. ಬಿಜೆಪಿಯ ನಿಯೋಗವು ಮನವಿ ನೀಡಿತ್ತು. ಕೆಇಎ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಡಿಸೆಂಬರ್‌ವರೆಗೆ ಪರೀಕ್ಷೆ ನಡೆಸಲು ದಿನ ಖಾಲಿ ಇಲ್ಲ ಎಂದು ತಿಳಿಸಿದ್ದರು. ಪ್ರಾಥಮಿಕ ಶಿಕ್ಷಣ ಸಚಿವ ಮಂಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ, ಶನಿವಾರದಂದು ಒಂದು ದಿನ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ‌ ಮಾಡಿದ್ದೆ. ಪರೀಕ್ಷೆ ನಡೆಸಲು ಶಿಕ್ಷಕರು ಬೇಕಾಗುತ್ತದೆ. ಎಲ್ಲ ಆಕಾಂಕ್ಷಿಗಳ ಮನವಿಗೆ ಮನ್ನಣೆ ಕೊಟ್ಟು, ಅನುಕೂಲವಾಗುವ ನಿಟ್ಟಿನಲ್ಲಿ ಸೆ.28ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಪೊಲೀಸ್ ಪೇದೆ ನೇಮಕಾತಿಗೆ ವಯೋಮಿತಿ ಹೆಚ್ಚಳದ ಕುರಿತು ಬೇರೆ ರಾಜ್ಯಗಳಿಂದ ಮಾಹಿತಿ ಕಲೆ ಹಾಕಿದ್ದೇವೆ. ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ, ವರದಿಯನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article