ಗೌಡೂರುತಾಂಡ:ಬಂಡೆಗಲ್ಲು ಮುಗಿಚಿಬಿದ್ದು ಮಕ್ಕಳಸಾವು, ಆಕ್ರಂದನ
ಕಲ್ಯಾಣ ಕರ್ನಾಟಕ ವಾರ್ತೆ
ತಾಲೂಕಿನ ಗೌಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌಡೂರು ದಿಂದ ಒಂದು ಕಿಲೋ ಮೀಟರ್ ದೂರದ ಜಮೀನೊಂದರಲ್ಲಿ ಬದುವಿಗೆ ಇರಿಸಿದ್ದ ಬೃಹತ್ ಗಾತ್ರದ ಬಂಡೆಗಲ್ಲು ಮುಗಿಚಿ ಬಿದ್ದು ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಸಾವನಪ್ಪಿದ್ದು ಗಂಬೀರವಾಗಿ ಗಾಯಗೊಂಡ ಓರ್ವ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆ ಮಂಗಳವಾರ ಮದ್ಯಾಹ್ನ ಜರುಗಿದೆ.
ಶಾಲೆಗೆ ರಜೆ ಇದ್ದುದರಿಂದ ಪಾಲಕರ ಜೊತೆಗೆ ಮಕ್ಕಳು ಜಮೀನಿಗೆ ತೆರಳಿದ್ದಾರೆ. ಈ ವೇಳೆ ಮಕ್ಕಳು ಬದುವಿನಲ್ಲಿ ಇರಿಸಿದ್ದ ಬಂಡೆಕಲ್ಲುಗಳ ಮೇಲೆ ಏರಿ-ಇಳಿದು ಆಟ ಆಡುತ್ತಿದ್ದಾಗ ಭಾರಿ ಗಾತ್ರದ ಬಂಡೆಕಲ್ಲು ಮುಗಿಚಿಬಿದ್ದು ೩ನೇ ತರಗತಿ ವಿದ್ಯಾರ್ಥಿ ಮಂಜುನಾಥ ತಂದೆ ಮಾನಪ್ಪ (೦೯) ವೈಶಾಲಿ ತಂದೆ ಮಾನಪ್ಪ (೦೭) ಬಂಡೆಕಲ್ಲಿನ ಮದ್ಯೆಸಿಕ್ಕು ಅಪ್ಪಚ್ಚಿಯಾಗಿದ್ದಾರೆ. ಘಟನೆಯಲ್ಲಿ ಲಿಂಗಸುಗೂರಿನ ವಿಸಿಬಿ ಪದವಿ ೩ನೇ ಸೆಮಿಸ್ಟರ್‌ನಲ್ಲಿ ಅಧ್ಯಯನ ಮಾಡುತ್ತಿದ್ದ ರಾಘವೇಂದ್ರ ತಂದೆ ಮಾನಪ್ಪ ಎಂಬ ಗಂಬೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾನೆ.
ಭಾರಿ ಗಾತ್ರದ ಬಂಡೆಕಲ್ಲು ಬಿದ್ದು ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಸಾವನಪ್ಪಿದ್ದು ಜನರು ಬಂಡೆಕಲ್ಲು ತೆರವಿಗೆ ಯತ್ನಿಸಿದರು ಬಂಡೆಕಲ್ಲು ಜಪ್ಪಯ್ಯ ಎನ್ನಲಿಲ್ಲ. ಇದರಿಂದ ನೆರೆದ ಜನರು ಅಸಹಾಯಕತೆ ವ್ಯಕ್ತಪಡಿಸಿದರು. ಇರ್ವರು ಮಕ್ಕಳ ಸಾವಿನ ದೃಶ್ಯ ಕಂಡ ಜನರು ಮಮ್ಮಲ ಮರುಗಿ ಕಣ್ಣೀರಾದರು.
ಮಕ್ಕಳ ಸಾವಿನಿಂದ ಪಾಲಕರು ಹಾಗೂ ನೆರೆದ ಜನರ ಅಕ್ರಂದನ ಮುಗಿಲು ಮುಟ್ಟಿತ್ತು. ಜೆಸಿಬಿ ಯಂತ್ರದ ಸಹಾಯದಿಂದ ಬಂಡೆಕಲ್ಲು ತೆರವುಗೊಳಿಸಿ ಮೃತ ದೇಹಗಳ ಹೊರತೆಗೆಯಲು ಗೌಡೂರು ತಾಂಡಾ ಸೇರಿದಂತೆ ಸುತ್ತಮುತ್ತ ನೆರೆದ ಜನರು ಗಂಟೆಗಟ್ಟಲೆ ಪ್ರಯತ್ನಿಸಿದರು. ಘಟನಾ ಸ್ಥಳಕ್ಕೆ ಹಟ್ಟಿ ಪಿಐ ಹೊಸಕೇರಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.