ಮಹಾಭಾರತ ಕಾವ್ಯದ ಪಾತ್ರಗಳು ಸರ್ವಕಾಲಿಕ ಸತ್ಯ ಮಹಾನ್ ಗ್ರಂಥ.
ಜಗದೀಶ ಶರ್ಮಾ ಸಂಪ
ಕಲ್ಯಾಣ ಕರ್ನಾಟಕ
ಲಿಂಗಸುಗೂರು: ದೇಶವೊಂದರ ಹೆಸರು ಒಳಗೊಂಡ ವಿಶ್ವದ ಏಕೈಕ ಕೃತಿ ಮಹಾಭಾರತ. ಐದು ಸಾವಿರ ವರ್ಷಗಳ ಹಿಂದೆ ಲಕ್ಷಕ್ಕೂ ಹೆಚ್ಚು ಶ್ಲೋಕ ಆಧರಿಸಿ ರಚಿತಗೊಂಡ ಮಹಾಭಾರತ ಕಾವ್ಯದ ಪಾತ್ರಗಳು ಸರ್ವಕಾಲಿಕ ಸತ್ಯ ಸಂಗತಿ ಒಳಗೊಂಡ ಮಹಾನ್ ಗ್ರಂಥವಾಗಿದೆ’ ಎಂದು ಬೆಂಗಳೂರಿನ ಜಗದೀಶ ಶರ್ಮಾ ಸಂಪ ಹೇಳಿದರು.
ಶನಿವಾರ ಸಂಜೆ ವೀರಶೈವ ವಿದ್ಯಾವರ್ಧಕ ಸಂಘ ಮತ್ತು ನಾವು-ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ವ್ಯಾಸ ಪ್ರಣೀತ ಅನ್ವಯಿಕ ಮಹಾಭಾರತ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮಹಾಭಾರತದ ಪಾತ್ರಗಳಲ್ಲಿ ನಮ್ಮನ್ನು ನಾವು ಕಾಣುತ್ತಿದ್ದೇವೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳಿಗೆ ಮಹಾಭಾರತ ಕಾವ್ಯ ನಿದರ್ಶನವಾಗಿದೆ’ ಎಂದರು.
‘ಐದು ಸಾವಿರ ವರ್ಷಗಳ ಹಿಂದಿನ ಕಾವ್ಯದ ಕುರಿತು ಕಪೋ ಕಲ್ಪಿತ ಮಾತುಗಳು ಕೇಳಿ ಬರುತ್ತಿವೆ. ಯಾವುದೇ ಕೃತಿ ಅಂದಿನ ಕಾಲ ಘಟ್ಟದ ಸಂಗತಿಗಳನ್ನು ಒಳಗೊಂಡಿರುತ್ತವೆ ಎಂಬುದಕ್ಕೆ ಮಹಾಭಾರತದಲ್ಲಿನ ಪಟ್ಟಣ ಹೆಸರು ಇಂದಿಗೂ ನೋಡಬಹುದು. ಅಂದಿನ ಮನುಷ್ಯನಲ್ಲಿನ ಚಿಂತನೆಗಳು ಇಂದಿನ ಮನುಷ್ಯ ಜೀವಿಯಲ್ಲಿ ಕಾಣುತ್ತಿವೆ. ಹೀಗಾಗಿ ಮಹಾಭಾರತ ಕಾವ್ಯ ಇಂದಿಗೂ ಪ್ರಸ್ತುತವಾಗಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ‘ಮಹಾಭಾರತ ಕಾವ್ಯವೊಂದು ಕುಟುಂಬದ ಹಿನ್ನಲೆಯನ್ನು ಇಟ್ಟುಕೊಂಡು ರಚಿತಗೊಂಡಿದೆ. ಧರ್ಮ ನಿಷ್ಠರು, ದ್ರೋಹಿಗಳು ಅಂದು ಇದ್ದಾರೆ, ಇಂದೂ ಇದ್ದಾರೆ. ಯುವ ಸಮೂಹ ಕಾವ್ಯದ ಪಾತ್ರಗಳ ಆತ್ಮಾವಲೋಕನ ಮಾಡಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು ಸುಂದರ ಬದುಕು ಕಟ್ಟಲು ಚಿಂತನ ಮಂಥನ ಅವಶ್ಯ’ ಎಂದರು.
ಬಾಗಲಕೋಟೆ ಬಿಂದುಮಾಧವಾಚಾರ್ಯ ನಾಗಸಂಪಿಗೆ ಮಹಾಭಾರತದ ಸಾರ್ವಕಾಲಿಕ ಸತ್ಯ ದರ್ಶನ ಕುರಿತು ಉಪನ್ಯಾಸ ನೀಡಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿದರು. ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ಕೃಷ್ಣಾನಂದ ಶರಣರು ಅಧ್ಯಕ್ಷತೆ ವಹಿಸಿದ್ದರು.