ನಿವೃತ್ತ ನೌಕರರಿಗೆ ಪಿಂಚಣಿ ಪರಿಷ್ಕರಣೆ,ತುಟ್ಟಿಭತ್ತೆ ಮಂಜೂರಿಗೆ ಒತ್ತಾಯಿಸಿ ಮನವಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸೂಗೂರು :ನಿವೃತ್ತ ನೌಕರರಿಗೆ ಪಿಂಚಣಿ ಯೋಜನೆಯನ್ನು ಪರಿಷ್ಕರಣೆ ಮಾಡಬೇಕು ಹಾಗೂ ತುಟ್ಟಿಭತ್ತೆಯನ್ನು ಮಂಜೂರಿ ಮಾಡಬೇಕು ಎಂದು ಒತ್ತಾಯಿಸಿ ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷರಾದ ಅಮರೇಶಪ್ಪ ಹೂನೂರು ನೇತೃತ್ವದಲ್ಲಿ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು

ಈ ಮೊದಲು ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಸಭೆ ಸೇರಿದ ನಿವೃತ್ತ ನೌಕರರು ಮೊದಲು ಸಹಿ ಸಂಗ್ರಹ ಮಾಡಿದರು ನಂತರ ಸಹಾಯಕ ಆಯುಕ್ತರ ಕಾರ್ಯಾಲಯಕ್ಕೆ ತೆರಳಿ ಪ್ರಧಾನಿಗೆ ಬರೆದ ಮನವಿಯನ್ನು ಸಲ್ಲಿಸಿ ನಿವೃತ್ತರಿಗೆ ಪಿಂಚಣಿಯಲ್ಲಿ ಅನ್ಯಾಯವಾಗಿದ್ದು ಸರಿಪಡಿಸಬೇಕು ತುಟ್ಟಿಭತ್ತೆಯನ್ನು ಮಂಜೂರಿ ಮಾಡಬೇಕು ಎಂದು ಒತ್ತಾಯಿಸಿದರು
ಅವರು ಮಾತನಾಡುತ್ತ ಕೇಂದ್ರ ಸರ್ಕಾರದಿಂದ ೨೦೦೪ ರಲ್ಲಿ ಹೊಸ ಪಿಂಚಣಿಯನ್ನು ಜಾರಿಗೆ ತರಲಾಯಿತು. ಅದೇ ರೀತಿ ದೇಶದ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರದ ಮಾದರಿಯಲ್ಲಿ ಹೊಸದಾಗಿ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇದರಿಂದ ಸರ್ಕಾರಿ ನೌಕರರು, ನಿವೃತ್ತಿ ಹೊಂದುವ ಸಂದರ್ಭದಲ್ಲಿ ಬರಬೇಕಾದ ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಸಾಕಷ್ಟು ಹೋರಾಟಗಳನ್ನು ಮಾಡಿದರೂ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವುದಿಲ್ಲ.
ಮುಂದಿನ ದಿನಗಳಲ್ಲಿ ಸರ್ಕಾರಿ ಸೇವೆಯಿಂದ ನೌಕರರು ನಿವೃತ್ತಿ ಹೊಂದಿದಾಗ ಅವರಿಗೆ ಹಳೆ ಪಿಂಚಣಿಯ ಆರ್ಥಿಕ ಸೌಲಭ್ಯಗಳು ದೊರೆಯುವುದಿಲ್ಲ. ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ ಆರ್ಥಿಕ ಸಂಕಷ್ಟವುಂಟಾಗದಂತೆ ಹಳೆ ಪಿಂಚಣಿ ಜಾರಿಯಾದರೆ ಹೆಚ್ಚು ಅನುಕೂಲವಾಗುತ್ತದೆ ಎಂದರು
.ಈ ಸಂದರ್ಭದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಹಾಜಿಮಲಂಗ ಬಾಬಾ, ಹನುಮಂತಪ್ಪ ಮೇಟಿ, ಶರಣಬಸವರಾಜ ನಾಡಗೌಡ, ಸಹಕಾರಿ ಸಂಘದ ಅಧ್ಯಕ್ಷರು ಎಂ ಜಿ ಹಿರೇಮಠ, ಸುರೇಶ್ ಕುಲಕರ್ಣಿ ಜೈಸಿಂಗ್,ಮೆಹಿಬೂದ ಬೇಗಂ,ಯಲ್ಲಪ್ಪ,ಭೀಮಣ್ಣನಾಯಕ,ಹಾಗೂ ಎಲ್ಲಾ ಪದಾಧಿಕಾರಿಗಳು ಸದಸ್ಯರು ಸೇರಿದಂತೆಇದ್ದರು.