ಮರ್ಯಾದೆಗಾಗಿ ಮಗಳನ್ನೇ ಕೊಂದ ಅಪ್ಪ : ತಡವಾಗಿ ಪ್ರಕರಣ ಬೆಳಕಿಗೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು : ಪರ ಪುರುಷನೊಂದಿಗೆ ಓಡಾಡುವ ಮೂಲಕ ಮನೆತನದ ಮರ್ಯಾದೆ ತೆಗೆಯುತ್ತಿದ್ದಾಳೆಂದು ಸ್ವಂತ ಮಗಳನ್ನೇ ಕೊಂದ ತಂದೆ ಶವವನ್ನು ಕೃಷ್ಣಾ ನದಿಗೆ ಎಸೆದಿದ್ದ ಘಟನೆ ಸುಮಾರು ಎಂಟು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಲಕ್ಕಪ್ಪ ಕಂಬಳಿ ಎನ್ನುವಾತ ತನ್ನ ಅಪ್ರಾಪ್ತ ಮಗಳು ರೇಣುಕಾ (17) ಅದೇ ಗ್ರಾಮದ ಹನುಮಂತ ಎನ್ನುವ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆಂದು ಕೊಲೆಗೈದ ಬಗ್ಗೆ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದ ಪೊಲೀಸರು ಪಿಐ ಪುಂಡಲೀಕ ಪಟಾತಾರ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ.
*ಘಟನೆ ವಿವರ*
ತಾಲ್ಲೂಕಿನ ಹಂಚಿನಾಳ ಗ್ರಾಮದ ಯುವತಿ ರೇಣುಕಾ ಪ್ರೀತಿಯಲ್ಲಿ ಜಾರಿದ್ದಳು. ಇದು ತಂದೆ ಲಕ್ಕಪ್ಪ ಕಂಬಳಿಗೆ ಸಹಿಸದಾಯಿತು. ಮಗಳಿಗೆ ಬುದ್ಧಿಮಾತು ಹೇಳಿದರೂ ಕೇಳಲಿಲ್ಲ. ಪ್ರೀತಿಗಾಗಿ ಮನೆಬಿಟ್ಟು ಹೋಗಿದ್ದಳು. ಮಗಳು ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದ. ಕೆಲ ದಿನಗಳ ಬಳಿಕ ಮಗಳನ್ನು ಹುಡುಕಿ ಪೊಲೀಸರು ಒಪ್ಪಿಸಿದ್ದರು. ಆದರೂ ಮಗಳು ಪ್ರೀತಿಯ ಗುಂಗಿನಿಂದ ಹೊರ ಬರಲಿಲ್ಲ. ನಮ್ಮ ಮರ್ಯಾದೆ ಕಳೀಬೇಡ ಅವ ನಮ್ಮ ಜಾತಿಯವನಲ್ಲ. ಅವನೊಂದಿಗೆ ಮಾತನಾಡುವುದನ್ನು ಬಿಡು ನಿನಗೆ ಬೇರೆ ಮದುವೆ ಮಾಡಿಕೊಡುವೆ ಎಂದು ಮಗಳಿಗೆ ತಾಕೀತು ಮಾಡಿದ್ದರೂ ಆಕೆ ಮಾತ್ರ ಪ್ರೀತಿಯ ಅಮಲಿನಲ್ಲಿದ್ದಳು.
18 ವರ್ಷ ತುಂಬಿದ ಮರು ದಿನವೇ ಹನುಂತನ ಜೊತೆ ಹೋಗುವುದಾಗಿ ಮನೆಯವರಿಗೆ ರೇಣುಕಾ ಹೇಳುತ್ತಿದ್ದಳು. ಕಂಡ ಕಂಡಲ್ಲಿ ಹನುಂಮತನ ಜೊತೆ ಸಲುಗೆಯಿಂದಿದ್ದ ರೇಣುಕಾಳ ವರ್ತನೆ ತಂದೆಯನ್ನು ಕೆರಳಿಸಿ ದುರ್ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ.