ಮುದಗಲ್: ಗ್ರಾನೈಟ್ ಗಣಿಗಾರಿಕೆಯಲ್ಲಿ ಸಿಡಿ ಮದ್ದು ಸ್ಪೋಟ:ವ್ಯಕ್ತಿ ಸಾವು
ಕಲ್ಯಾಣ ಕರ್ನಾಟಕ ವಾರ್ತೆ
ಮುದಗಲ್:
ಗ್ರಾನೈಟ್ ಗಣಿಗಾರಿಕೆಯಲ್ಲಿ ಕಲ್ಲುಗಳನ್ನು ಸ್ಪೋಟಿಸಲು ಸಿಡಿ ಮದ್ದು ಜೋಡಿಸುವಾಗಲೆ ಸ್ಪೋಟಗೊಂಡು ಕಾರ್ಮಿಕನೊಬ್ಬ ಸ್ಥಳದಲ್ಲಿಯೇ ಸಾವನಪ್ಪಿ ಮತ್ತೊಬ್ಬ ಗಾಯಗೊಂಡಿರುವ ಘಟನೆ ಮುದಗಲ್ ಹೋಬಳಿಯ ಮಾಕಾಪುರು ಹೊರವಲಯದಲ್ಲಿ ಶನಿವಾರ ಜರುಗಿದೆ.
ಮೃತನಾದ ಕಾರ್ಮಿಕ ಬಾಗಲಕೋಟೆ ಜಿಲ್ಲೆಯ ಇಲಕಲ್ ಸಮೀಪದ ಮೆಣಸಿಗೆರಿಯ ವೆಂಕಟೇಶ್ (38) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಮತ್ತೊಬ್ಬ ಕಾರ್ಮಿಕ ಮಾಲಿಂಗಪ್ಪ ಗಂಬೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ. ಸಿಡಿ ಮದ್ದು ಸ್ಪೋಟದಿಂದ ಮೃತ ಕಾರ್ಮಿಕನ ಮುಖ ಹಾಗೂ ಎದೆ ಭಾಗ ಛಿದ್ರವಾಗಿದೆ.
ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸೇರಿ ಮಾಕಾಪುರು ಸುತ್ತಲು ಅನೇಕ ಗ್ರಾನೈಟ್ ಗಣಿಗಳು ಇವೆ.ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಅನೇಕ ಅವಘಡಗಳು ನಡೆಯಲು ಕಾರಣವಾಗಿದೆ. ಅಲ್ಲದೆ ಅನೇಕ ಜೀವ ಹಾನಿ ಮತ್ತು ಗಾಯಗೊಂಡ ಘಟನೆಗಳು ಜರುಗುವುದು ಸಾಮಾನ್ಯವಾಗಿವೆ.
ಘಟನೆ ನಡೆದ ಗಣಿಗಾರಿಕೆ ಪ್ರದೇಶಕ್ಕೆ ಮುದಗಲ್ ಪೊಲೀಸ್ ರು ಬೇಟಿ ನೀಡಿದ್ದು,ಅಷ್ಟರಲ್ಲಿ ಮೃತ ಕಾರ್ಮಿಕನ ಮೃತ ದೇಹ ಸ್ಥಳದಿಂದ ಬೇರ ಕಡೆ ಸಾಗಿಸಿದ್ದರಿಂದ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆಂಬುದು ಕಾದು ನೋಡಬೇಕಾಗಿದೆ.