ತಳವಾರ ಹೆಸರಿನಲ್ಲಿ ನಕಲಿ ಎಸ್. ಟಿ. ಪ್ರಮಾಣ ಪತ್ರ ತಡೆಯಲು ಮುಖ್ಯ ಮಂತ್ರಿಗಳಿಗೆ ಒತ್ತಾಯ

Laxman Bariker
ತಳವಾರ ಹೆಸರಿನಲ್ಲಿ ನಕಲಿ ಎಸ್. ಟಿ. ಪ್ರಮಾಣ ಪತ್ರ ತಡೆಯಲು ಮುಖ್ಯ ಮಂತ್ರಿಗಳಿಗೆ ಒತ್ತಾಯ
WhatsApp Group Join Now
Telegram Group Join Now

ತಳವಾರ ಹೆಸರಿನಲ್ಲಿ ನಕಲಿ ಎಸ್. ಟಿ. ಪ್ರಮಾಣ ಪತ್ರ ತಡೆಯಲು ಮುಖ್ಯ ಮಂತ್ರಿಗಳಿಗೆ ಒತ್ತಾಯ

ಕಲ್ಯಾಣ ಕರ್ನಾಟಕ ವಾರ್ತೆ

ಬೆಂಗಳೂರು : ತಳವಾರ ಹೆಸರಿನಲ್ಲಿ ರಾಜ್ಯದಾದ್ಯಂತ ನಕಲಿ ಎಸ್ ಟಿ ಪ್ರಮಾಣ ಪತ್ರ ಪಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಹರಿಹರ ಸಮೀಪದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದಪುರಿ ಮಹಾ ಸ್ವಾಮಿಗಳ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದೆ.


ವಾಲ್ಮೀಕಿ ಶ್ರೀಗಳು, ಸಮುದಾಯದ ಶಾಸಕರುಗಳ ಮತ್ತು ಮುಖಂಡರುಗಳ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನೆರವೇರಿತು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದ ಸ್ವಾಮೀಜಿ, ಶಾಸಕರಾದ ಬಿ.ಎಂ.ನಾಗರಾಜ, ಟಿ.ರಘುಮೂರ್ತಿ, ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ್, ರಾಜಾ ವೇಣುಗೋಪಾಲ ನಾಯಕ, ಡಾ.ಶ್ರೀನಿವಾಸ, ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ.ಚಂದ್ರಶೇಖರಪ್ಪ ಮತ್ತಿತರ ಮುಖಂಡರನ್ನೊಳಗೊಂಡ ವಾಲ್ಮೀಕಿ ನಾಯಕ ಸಮಾಜದ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇತ್ತೀಚಿಗೆ ಭಾರತ ಸರ್ಕಾರದ ಅಧಿಸೂಚನೆ ಪ್ರಕಾರ ಪಂಗಡದವರ ಪಟ್ಟಿಯ ಕ್ರಮ ಸಂಖ್ಯೆ 38 ರಲ್ಲಿರುವ ನಾಯಕ ಬುಡಕಟ್ಟುವಿನ ಪರ್ಯಾಯ ಹೆಸರುಗಳಾದ ತಳವಾರ ಮತ್ತು ಪರಿವಾರ ಬುಡಕಟ್ಟು ಹೆಸರುಗಳನ್ನು ಪರಿಶಿಷ್ಟ ಪಂಗಡದವರ ಪಟ್ಟಿಗೆ ಸೇರಿಸಲಾಗಿದೆ. ಆದರೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲ್ಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ. ಹೊಸಪೇಟೆ ಮತ್ತು ಬಿಜಾಪುರ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ನಾಯಕ ಬುಡಕಟ್ಟುವಿನ ಪರ್ಯಾಯ ತಳವಾರ ಬುಡಕಟ್ಟುವಿನ ಬದಲಾಗಿ ಹಿಂದುಳಿದ ವರ್ಗದ ಗಂಗಾಮತ ಜಾತಿಯ ಕಬ್ಬಲಿಗ, ಕಬ್ಬೇರ, ಕೋಳಿ, ಅಂಬಿಗ, ಬೆಸ್ತ ಸಮಾಜದವರು ತಳವಾರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತಹಸೀಲ್ದಾ‌ರ್ ರವರುಗಳಿಂದ ತೆಗೆದುಕೊಂಡು ಪರಿಶಿಷ್ಟ ಪಂಗಡದವರಿಗೆ ಮೀಸಲಿರುವ ಸೌಲಭ್ಯಗಳನ್ನು ಪಡೆದು ವಂಚಿಸುತ್ತಿದ್ದಾರೆ. ಇದರಿಂದ ನೈಜ ಪರಿಶಿಷ್ಟ ಪಂಗಡದವರಿಗೆ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಹಾಗೂ ರಾಜಕೀಯ ಮೀಸಲಾತಿ ಸೌಲಭ್ಯಗಳನ್ನು ಪಡೆಯುವುದರಲ್ಲಿ ಅನ್ಯಾಯವಾಗುತ್ತಿದೆ.
ಆದುದರಿಂದ ಸನ್ಮಾನ್ಯ ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಜೊತೆಗೆ ಕಾನೂನುಬಾಹಿರವಾಗಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತೆಗೆದುಕೊಳ್ಳುತ್ತಿರುವ ತಪ್ಪಿತಸ್ಥರ ಮೇಲೆ ಮತ್ತು ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಸರಿಯಾಗಿ ದಾಖಲೆಗಳನ್ನು ಪರಿಶೀಲಿಸದೆ ಹಾಗೂ ಸರಿಯಾಗಿ ಸ್ಥಳ ಮಹಜರ್ ನಡೆಸದೆ ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದವರಿಗೆ ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳಿಂದ ಆಗುತ್ತಿರುವ ಅನ್ಯಾಯಗಳನ್ನು ತಡೆಗಟ್ಟಬೇಕು ಎಂದು ಕೋರಿದರು.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ವರ್ಗದವರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ನಿಗಮದಿಂದ ಅನುಷ್ಠಾನ ಮಾಡಲಾಗುತ್ತಿದೆ. ಆದರೆ ಇತ್ತೀಚಿಗೆ ಪರಿಶಿಷ್ಟ ವರ್ಗದವರ ಆರ್ಥಿಕ ಅಭಿವೃದ್ದಿಗಾಗಿ ವಿವಿಧ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ನಿಗಮಕ್ಕೆ ಬಿಡುಗಡೆಯಾಗಿದ್ದ ರೂ. 187.33 ಕೋಟಿಗಳ ಅನುದಾನದಲ್ಲಿ ರೂ. 88.63 ಕೋಟಿಗಳಷ್ಟು ಅನುದಾನ ದುರುಪಯೋಗವಾಗಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಈ ರೀತಿ ದುರುಪಯೋಗವಾಗಲು ಕಾರಣಕರ್ತರಾದವರ ಮೇಲೆ ರಾಜ್ಯ ಸರ್ಕಾರ ಕ್ರಮವಹಿಸಿರುವುದು ಸ್ವಾಗತಾರ್ಹ, ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದ ದುರುಪಯೋಗಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಪರಿಶಿಷ್ಟ ವರ್ಗದವರ ಆರ್ಥಿಕ ಅಭಿವೃದ್ದಿಗಾಗಿ ವಿವಿಧ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಬಿಡುಗಡೆಯಾದ ಅನುದಾನ ದುರುಪಯೋಗವಾಗಿರುವುದರಿಂದ ಅರ್ಹ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಭೂರಹಿತ ಕೃಷಿಕಾರ್ಮಿಕರಿಗೆ, ನಿರುದ್ಯೋಗಿ ಯುವಕ/ಯುವತಿಯರಿಗೆ ಮುಂತಾದ ನಿಗದಿತ ಸೌಲಭ್ಯಗಳನ್ನು ನೀಡಲು ತೊಂದರೆಯಾಗಿರುತ್ತದೆ. ಈ ದುರುಪಯೋಗವಾಗಿರುವ ಅನುದಾನ ವಸೂಲಿಯಾಗುವವರೆಗೆ ಪರಿಶಿಷ್ಟ ವರ್ಗದ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡಿ ನಿಗದಿತ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಜನಾಂಗದ ಅಹವಾಲುಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿ, ತಕ್ಷಣ ಸಭೆ ಕರೆದು ಚರ್ಚಿಸಿ ಪರಿಹರಿಸುವುದಾಗಿ ತಿಳಿಸಿದರು.
ಸಮಾಜದ ಮುಖಂಡರಾದ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಹಾಗೂ ಮಾಜಿ ಉಪ ಮೇಯರ್ ನಂದಕುಮಾರ ಮಾಲಿ ಪಾಟೀಲ್, ಯಾದಗಿರಿ ಜಿಲ್ಲಾಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ, ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಮರೆಪ್ಪ ನಾಯಕ ಮಗ್ದಂಪೂರ,
ರಮೇಶ ದೊರೆ ಆಲ್ದಾಳ, ಶ್ರವಣಕುಮಾರ ನಾಯಕ, ಡಾ.ಪ್ರಭು ಹುಲಿನಾಯಕ ಶರಣು ಸುಬೇದಾರ, ಬಸವರಾಜ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.


Sent from Fast notepad

WhatsApp Group Join Now
Telegram Group Join Now
Share This Article