*ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಇಂಡಿಯಾ ಅವರಿಂದ*
*ಐತಿಹಾಸಿಕ ಸೂಡಿ ದೇವಸ್ಥಾನದ ನಾಗಕುಂಡ ಪುಷ್ಕರಣಿ ಸ್ಥಳ ವೀಕ್ಷಣೆ*
ಕಲ್ಯಾಣ ಕರ್ನಾಟಕ ವಾರ್ತೆ
ಗದಗ (ಕರ್ನಾಟಕ ವಾರ್ತೆ) ಸೆಪ್ಟೆಂಬರ್ 2; ಗದಗ ಜಿಲ್ಲೆಯ ಐತಿಹಾಸಿಕ ಪಾರಂಪರಿಕ ಪ್ರಸಿದ್ಧ ಪುರಾತನ ಸ್ಥಳವಾದ ಸೂಡಿಯ ಜೋಡು ಗೋಪುರ ದೇವಸ್ಥಾನ ನಾಗಕುಂಡ ಪುಷ್ಕರಣಿ (ರಸದ ಬಾವಿ) ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ಸೋಮವಾರ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನಾಗಕುಂಡ ಪುಷ್ಕರಣಿ ಹಾಗೂ ಸುತ್ತಲಿನ ಸ್ಥಳ ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಿರ್ವಹಣೆ ಮಾಡುವ ಕುರಿತಂತೆ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳಾದ ರಾಜಶ್ರಿ, ಪ್ರತಿಮಾ ರಾವ್, ಶರತ್ಚಂದ್ರ ಅವರುಗಳು ಸೂಡಿ ಗ್ರಾಮಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಐತಿಹಾಸಿಕ ಸ್ಮಾರಕಗಳ ಕುರಿತು ಅಧಿಕಾರಿಗಳಿಂದ ಹಾಗೂ ಸ್ಥಳೀಯ ಪ್ರಮುಖರಿಂದ ಮಾಹಿತಿ ಕಲೆ ಹಾಕಿದರು.
ರೋಣ ಶಾಸಕರು ಹಾಗೂ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಜಿ.ಎಸ್. ಪಾಟೀಲ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಆಗಮಿಸಿದ ಪ್ರತಿನಿಧಿಗಳಿಗೆ ಗೌರವಿಸಿ ಸತ್ಕರಿಸಿ ಮಾತನಾಡಿ ಸೂಡಿ ಐತಿಹಾಸಿಕವಾಗಿ ಬಹಳಷ್ಟು ಪ್ರಸಿದ್ಧವಾಗಿದೆ. ಇಲ್ಲಿನ ರಸದ ಬಾವಿ ಪುಷ್ಕರಣಿ ಸೇರಿದಂತೆ ವಿವಿಧ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಿಸಿ ನಿರ್ವಹಿಸಲು ಮುಂದೆ ಬಂದಿರುವ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಇಂಡಿಯಾ ಸಂಸ್ಥೆಗೆ ಅಭಿಮಾನ ಪೂರ್ವಕ ಅಭಿನಂದನೆಗಳು ಎಂದರು. ಈ ಸ್ಮಾರಕಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಯಿಂದ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಹಿರಿಮೆ ದೊರೆಯಲಿದೆ ಎಂದರು.
11ನೇಯ ಶತಮಾನದಲ್ಲಿ ಗದಗ ಜಿಲ್ಹೆ ಸೂಡಿಯು ಕಲ್ಯಾಣ ಚಾಲುಕ್ಯ ಅರಸರ ಮಗಳಾದ ಅಪ್ರತಿಮ ಮಹಿಳೆ ಅಕ್ಕಾದೇವಿಯ ಆಡಳಿತ ಕಾಲದಲ್ಲಿ ಶಿಲ್ಪ ಕಲೆಯ ವೈಭವಕ್ಕೆ ಬಹಳ ಪ್ರಶಿದ್ಧಿ ಪಡೆದಿತ್ತೆಂದು ಮತ್ತು ಇಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಶಿಲ್ಪಕಲೆ, ಲಲಿತಕಲೆ, ಆಚಾರ ಸಂಹಿತೆ, ನಾಟ್ಯಶಾಸ್ತ್ರ, ಭಾಷಾ ಅಧ್ಯಯನ, ಕಲಿಸಲಾಗುತ್ತಿತ್ತೆಂದು ಪ್ರಾಚ್ಯವಸ್ತು ಇಲಾಖೆಯವರಿಂದ 1989ರಲ್ಲಿ ಇಲ್ಲಿಯ ಅನೇಕ ಶಿಲಾಲಿಪಿಗಳಿಂದ ಕಂಡುಬಂದಿದೆ.
ನಾಗೇಶ್ವರ ದೇವಸ್ಥಾನ (ಜೋಡು ಕಳಸದ ಗುಡಿ), ಈಶ್ವರ, ನಂದಿಮಂಟಪ, ಹನ್ನೊಂದು ಅಡಿ ಎತ್ತರದ ಬೃಹತ್ ಗಣಪತಿಯ ದೇವಾಲಯ ಮತ್ತು ಎಂಬತ್ತು ಅಡಿ ಸುತ್ತಳತೆಯ ಐವತ್ತು ಅಡಿ ಆಳದ ಬೃಹತ್ ನಾಗಕುಂಡ ಭಾವಿ (ರಸ್ತ ಭಾವಿ) ಜೀರ್ಣೋದ್ಧಾರಗೊಂಡು ನೋಡುವಂತಾಗಿವೆ. ಇಡೀ ದೇವಾಲಯದ ಒಳಗೆ ಮತ್ತು ಹೊರಗೆ ಮತ್ತು ನಾಗಕುಂಡ ಭಾವಿಯ ಒಳಗೋಡೆಯಲ್ಲಿ ಉಬ್ಬುಕಂಬದ ಗೋಪುರ ಮಾದರಿಯ ಕೆತ್ತನೆ ಸಹ ಬೆರಗು ಗೊಳಿಸುವಂತೆ ಇದೆ. ಭಾವಿಯ ತಳಭಾಗದಲ್ಲಿ ಸುತ್ತಲೂ ಮೆಟ್ಟಲುಗಳಿದ್ದು ನಡುವೆ ದ್ವಾರಮಂಟಪವಿದೆ. ಈ ಎಲ್ಲ ಶಿಲ್ಪ ಕಲಾವೈಭವ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಂತೆ ಇವೆ. ಈ ಪುಷ್ಕರಣಿ ಕಲ್ಯಾಣ ಚಾಲುಕ್ಯರ ಅತಿ ವೈಭವದ ಕೊಳ ಎಂಬುದಕ್ಕೆ ಐತಿಹಾಸಿಕ ದಾಖಲೆಗಳು ಲಭ್ಯವಾಗಿವೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಮಾಹಿತಿ ಒದಗಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರೊಂದಿಗೆ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳು ಸಭೆ ನಡೆಸುವ ಮೂಲಕ ಸೂಡಿ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿ ಕುರಿತು ಚರ್ಚಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಸೂಡಿ ಸ್ಮಾರಕಗಳ ಅಭಿವೃದ್ಧಿಗೆ ಸ್ಥಳ ಪರಿಶೀಲನೆಗೆ ಆಗಮಿಸಿರುವುದು ಸಂತಸ ತಂದಿದೆ. ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ತಮ್ಮ ಸಂಸ್ಥೆಯಿಂದ ಮಾಡಲು ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸೂಡಿಯ ಸ್ಮಾರಕಗಳ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ತಹಶೀಲ್ದಾರ ಕೆ. ನಾಗರಾಜ, ಧಾರವಾಡದ ಪುರಾತತ್ವ ಇಲಾಖೆಯ ಉಪನಿರ್ದೇಶಕಿ ಕಾವ್ಯಶ್ರೀ, ರಾಜಾರಾಂ, ಚಂದ್ರಶೇಖರ್ ಮುಸಳಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಪ್ರವಾಸೊದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಸೇರಿದಂತೆ ಮತ್ತಿತರರು ಇದ್ದರು.